“ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ” – ಎಂದು ಕವಿಗಳು ಸೂರ್ಯೋದಯವನ್ನು ಸುಂದರವಾಗಿ ವರ್ಣಿಸಿದ್ದಾರೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸುಂದರ ಸಮಯದಲ್ಲಿ ಉಂಟಾಗುವ ವೈಜ್ಞಾನಿಕ ವಿದ್ಯಮಾನದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
ನಾವೆಲ್ಲರೂ ಆಕಾಶದಲ್ಲಿ ಸೂರ್ಯನ ಚಲನೆಯನ್ನು ಗಮನಿಸಿರುತ್ತೇವೆ ಹಾಗೂ ಪ್ರತಿನಿತ್ಯ ಅನುಭವಿಸುತ್ತೇವೆ. ಇದಕ್ಕೆ ಕಾರಣ ಸೂರ್ಯನ ಸುತ್ತ ಭೂಮಿಯ ಚಲನೆ ಹಾಗೆಯೇ ತನ್ನದೇ ಕಕ್ಷೆಯಲ್ಲಿ ಸುತ್ತುತ್ತಿರುವ ಭೂಮಿ ಮತ್ತು ಸೂರ್ಯನು ಕೂಡ ತನ್ನದೇ ಕಕ್ಷೆಯಲ್ಲಿ ಸುತ್ತುತ್ತಿರುವುದು.
ಸೂರ್ಯನಿಗೆ ಭೂಮಿಯ ಯಾವ ಭಾಗವು ಮುಖ ಮಾಡಿರುತ್ತದೋ ಆ ಭಾಗಕ್ಕೆ ಹಗಲಿನ ಸಮಯ ಮತ್ತು ಸೂರ್ಯನಿಗೆ ವಿಮುಖವಾಗಿರುವ ಭಾಗಕ್ಕೆ ರಾತ್ರಿಯ ವೇಳೆಯಾಗಿರುತ್ತದೆ. ಭೂಮಿಯ ಮೇಲೆ ಜೀವಿಸಲು ಸೂರ್ಯನ ಬೆಳಕು, ತಾಪ ಅತ್ಯವಶ್ಯಕ. ಸೂರ್ಯನಿಂದ ಬರುವ ಈ ಬೆಳಕು ಒಂದು ಖಗೋಳ ಮಾನ ಅಂದರೆ 1.495×10
ನಿರ್ವಾತದಲ್ಲಿ ಬೆಳಕಿನ ವೇಗ ( C ) ಸೆಕೆಂಡಿಗೆ ಸುಮಾರು 299792458 ಮೀಟರ್. ಆದರೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಅದು C ಯ ವೇಗದಲ್ಲಿ ಚಲಿಸುವುದಿಲ್ಲ. ಬದಲಿಗೆ ಅದು C ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತದೆ.
ನಮಗೆ ತಿಳಿದಿರುವಂತೆ ಬೆಳಕಿನ ವಕ್ರೀಭವನವೆಂದರೆ ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸಿದಾಗ ಬಾಗುವಂತಹ ಪ್ರಕ್ರಿಯೆ. ಆದರೆ ಮಾಧ್ಯಮದ ಸಾಂದ್ರತೆಯು ಬದಲಾಗುವುದರಿಂದ ಬೆಳಕಿನ ವೇಗದಲ್ಲಿ ಬದಲಾವಣೆ ಉಂಟಾಗುತ್ತದೆ. ಇದೇ ರೀತಿ ಸೂರ್ಯನ ಬೆಳಕು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಅದರ ವೇಗದಲ್ಲಿ ಬದಲಾವಣೆ ಉಂಟಾಗುತ್ತದೆ. ಇನ್ನೊಂದು ಸಂಗತಿ ಏನೆಂದರೆ ವ್ಯೋಮದ ದ್ರೃಕ್ ಸಾಂದ್ರತೆಯು ನಮ್ಮ ಭೂಮಿಯ ವಾತಾವರಣಕ್ಕಿಂತ ಕಡಿಮೆ ಇರುತ್ತದೆ.
ಹಾಗಾಗಿ ಸೂರ್ಯೋದಯದ ಸಮಯದಲ್ಲಿ ಒಂದು ಚಮತ್ಕಾರ ಉಂಟಾಗುತ್ತದೆ.
ಏನು ಈ ಭ್ರಮೆ?
ನೀವು ಸೂರ್ಯೋದಯದ ಸಮಯದಲ್ಲಿ ನೋಡುವುದು ನಿಜವಾದ ಸೂರ್ಯ ಅಲ್ಲ ! ನಿಜವಾಗಿ ಸೂರ್ಯನು ಕ್ಷಿತಿಜದ ಕೆಳಗೇ ಇರುತ್ತಾನೆ ಹಾಗೂ ಸುಮಾರು ಐದು ನಿಮಿಷಗಳ ಬಳಿಕ ಕ್ಷಿತಿಜದ ಮೇಲೆ ಸೂರ್ಯನ ಉದಯವಾಗುತ್ತದೆ. ಅಂದರೆ ಭೂಮಿಯ ವಾತಾವರಣವು ಸೂರ್ಯನ ಬೆಳಕನ್ನು ಬಾಗಿಸುವುದರಿಂದ ನಿಜವಾದ ಸೂರ್ಯೋದಯಕ್ಕೆ ಮುನ್ನವೇ ನಮಗೆ ಸೂರ್ಯನು ಉದಯವಾಗಿರುವಂತೆ ಭಾಸವಾಗುತ್ತದೆ. ಹೀಗೆ ಸೂರ್ಯಾಸ್ತದ ಸಮಯದಲ್ಲಿ ಕೂಡ ಉಂಟಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ 5 ನಿಮಿಷಗಳ ಮುಂಚೆಯೇ ಸೂರ್ಯನು ಅಸ್ತವಾಗಿದ್ದರೂ ನಮಗೆ ಸೂರ್ಯನು ಕ್ಷಿತಿಜದಲ್ಲೇ ಇರುವಂತೆ ಭಾಸವಾಗುತ್ತದೆ.
ಈ ಒಂದು ಸುಂದರ ವಿದ್ಯಮಾನದ ಕಾರಣದಿಂದ ನಮಗೆ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಬೆಳಕು ಕೆಲವು ನಿಮಿಷಗಳ ಕಾಲ ಹೆಚ್ಚುವರಿಯಾಗಿ ಸಿಗುತ್ತದೆ.
ಆದ್ದರಿಂದ ನಮಗೆ ಸಮವಾದ ಹಗಲು ಮತ್ತು ರಾತ್ರಿಯುಳ್ಳ ವಿಷುವತ್ ಸಂಕ್ರಾಂತಿಯ ದಿನ ಹೆಚ್ಚುವರಿ 10 ನಿಮಿಷಗಳ ಸೂರ್ಯನ ಬೆಳಕು ಸಿಗುತ್ತದೆ. ಹಾಗಾಗಿ ವಿಷುವತ್ ಸಂಕ್ರಾಂತಿಯ ಕೆಲವು ದಿನಗಳ ಮೊದಲು ಹಾಗೂ ಕೆಲವು ದಿನಗಳ ನಂತರ ಸಮವಾದ ಹಗಲು ಮತ್ತು ರಾತ್ರಿ ಇರುತ್ತದೆ. ಇದೇ ರೀತಿ ನಕ್ಷತ್ರಗಳು ಕೂಡ ಈ ಒಂದು ಪ್ರಕ್ರಿಯೆಗೆ ಒಳಪಡುತ್ತವೆ.
ಈ ಕೆಳಗಿನ ಚಿತ್ರದಲ್ಲಿ ಕೆಂಪು ಗೆರೆಯು ಲಂಬ ಮತ್ತು ಸ್ಪರ್ಶಕವನ್ನು , ಹಸಿರು ಗೆರೆಯು ಭೂಮಿಯ ವಾತಾವರಣದ ಹೊರಗೆ ಬೆಳಕಿನ ಮಾರ್ಗವನ್ನು ಸೂಚಿಸುತ್ತದೆ.
Very nice