ಹಿಮ್ಮುಖ ಚಲನೆ

April 12, 2022

ನೀವು ರಾತ್ರಿಯ ಆಕಾಶವೀಕ್ಷಣೆಯನ್ನು ಆನಂದಿಸುವ ಹವ್ಯಾಸಿ ಖಗೋಳ ವೀಕ್ಷಕರಾಗಿದ್ದರೆ, ಗ್ರಹಗಳ ಹಿಮ್ಮುಖ ಚಲನೆಯ ಬಗ್ಗೆ ಕೇಳಿರಬಹುದು. ಸಾಮಾನ್ಯವಾಗಿ, ಗ್ರಹಗಳು ಯಾವಾಗಲೂ ಪ್ರತಿ ರಾತ್ರಿಯಿಂದ ಇನ್ನೊಂದು ರಾತ್ರಿಯ ಅವಧಿಯಲ್ಲಿ ಆಕಾಶದಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುವಂತೆ ತೋರುತ್ತವೆ. ಆದರೆ, ಇದರ ಮಧ್ಯೆಯೇ,‌‌ ವರ್ಷದಲ್ಲಿ ಕೆಲವು ಕಾಲ ಆಕಾಶದಲ್ಲಿ ಈ ಗ್ರಹಗಳು ತಮ್ಮ ಸಾಮಾನ್ಯ ಚಲನೆಯ ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ತೋರುತ್ತದೆ.‌ ಇದನ್ನೇ ನಾವು ಹಿಮ್ಮುಖ ಚಲನೆ ಅಥವಾ ರೆಟ್ರೋಗ್ರೇಡ್ ಮೋಷನ್ ಎಂದು ಕರೆಯುತ್ತೇವೆ.

ಹಾಗಾದರೆ,‌ ನಿಜವಾಗಿಯೂ ಈ ಹಿಮ್ಮುಖ ಚಲನೆ ಅಂದರೆ ಏನು?
ಗ್ರಹಗಳು ತಮ್ಮ ಚಲನೆಯ ದಿಕ್ಕನ್ನು ಬದಲಿಸಿ, ಹಿಮ್ಮುಖವಾಗಿ ಚಲಿಸಲು‌ ನಿರ್ಧರಿಸಿ ಪುನಃ ಮೊದಲಿನ ದಿಕ್ಕಿನಲ್ಲಿ ಚಲಿಸುತ್ತವೆಯೇ? ಈ ಪ್ರಶ್ನೆಗೆ ಪರಿಹಾರ ಸರಳವಾಗಿದ್ದರೂ, ನಾವೆಲ್ಲ ಊಹಿಸಿರುವುದಕ್ಕಿಂತ ಸ್ವಲ್ಪ ವಿಭಿನ್ನವಾಗಿದೆ.
ಹಿಮ್ಮುಖ ಚಲನೆಯನ್ನು ಸುಲಭವಾಗಿ ಅರ್ಥೈಸುವುದಾದರೆ, ಆಕಾಶದಲ್ಲಿ ಗ್ರಹಗಳ ಚಲನೆಯಲ್ಲಿ ಬದಲಾವಣೆ ಉಂಟಾದಂತೆ ತೋರುವ ಭ್ರಮೆ ಎಂದು ಹೇಳಬಹುದು. ಈ ಭ್ರಮೆಗೆ ಕಾರಣ, ಸೂರ್ಯನ ಸುತ್ತ ತಮ್ಮ ಕಕ್ಷೆಯಲ್ಲಿರುವ ಗ್ರಹಗಳ ಸಾಪೇಕ್ಷ ಸ್ಥಾನಗಳು.
ಈ ವಿದ್ಯಮಾನವು ಏನು ಮತ್ತು ಹೇಗೆ ಸಂಭವಿಸುತ್ತದೆ ಎಂಬುದನ್ನು ಇನ್ನೂ ಸರಳವಾಗಿ ತಿಳಿದುಕೊಳ್ಳೋಣ :

ಮಂಗಳ ಗ್ರಹದ ಹಿಮ್ಮುಖ ಚಲನೆ

Mars Retrograde
ಭೂಮಿಯಿಂದ ನೋಡಿದಾಗ ಮಂಗಳ ಗ್ರಹದ ಹಿಮ್ಮುಖ ಚಲನೆ.

ಸಾಮಾನ್ಯವಾಗಿ, ಹಿನ್ನೆಲೆ ನಕ್ಷತ್ರಗಳನ್ನು ಆಧಾರವಾಗಿಟ್ಟುಕೊಂಡು ಗಮನಿಸಿದರೆ, ಎಲ್ಲಾ ಗ್ರಹಗಳು ಬಾಹ್ಯಾಕಾಶದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಚಲಿಸುತ್ತವೆ. ಈ ಚಲನೆಯ‌ ದಿಕ್ಕು, ಭೂಮಿಯು ಸೂರ್ಯನ ಸುತ್ತ ಪರಿಭ್ರಮಿಸುವ ದಿಕ್ಕು, ಇವೆರಡೂ ಕೂಡ ಒಂದೇ ಆಗಿದೆ. ಇದನ್ನು ಮುಮ್ಮುಖ ಚಲನೆ ಅಥವಾ ಪ್ರೋಗ್ರೇಡ್ ಮೋಷನ್ ಎಂದು ಕರೆಯಲಾಗುತ್ತದೆ. ಆದರೆ, ನಿರ್ದಿಷ್ಟ ಅವಧಿಯಲ್ಲಿ ಆವರ್ತನೀಯವಾಗಿ ಕೆಲವು ಕಾಲ ಗ್ರಹಗಳು ವಿರುದ್ಧ ದಿಕ್ಕಿನಲ್ಲಿ ಅಂದರೆ ಹಿಮ್ಮುಖವಾಗಿ ಚಲಿಸುವಂತೆ ಕಾಣುತ್ತದೆ.

ಭೂಮಿಯಿಂದ ನೋಡಿದರೆ, ಪ್ರತಿ ರಾತ್ರಿ ನಿರ್ದಿಷ್ಟ ಸಮಯದಲ್ಲಿ ಒಂದು ಗ್ರಹದ ಚಲನೆಯನ್ನು ಗಮನಿಸಿದರೆ ಆ ಗ್ರಹವು ನಿಧಾನವಾಗಿ ಪೂರ್ವ ದಿಕ್ಕಿನೆಡೆಗೆ ಸರಿಯುತ್ತಿರುವಂತೆ ತೋರುತ್ತದೆ. ಹಾಗೂ ಅದರ ಹಿಮ್ಮುಖ ಚಲನೆಯ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ಪಶ್ಚಿಮದೆಡೆಗೆ ಸರಿಯುವಂತೆ ಕಾಣುತ್ತದೆ.

ಈ ಚಿತ್ರದಲ್ಲಿ, ಸಿಂಹ ರಾಶಿಯಿಂದ ಕನ್ಯಾ ರಾಶಿಯನ್ನು ಪ್ರವೇಶಿಸುವಾಗ ಮಂಗಳ ಗ್ರಹವು ಹಿಮ್ಮುಖ ಚಲನೆಯಲ್ಲಿರುವುದನ್ನು ಗಮನಿಸಬಹುದು.
ಈ ರೆಟ್ರೋಗ್ರೇಡ್ ಎಂಬ ಪದವನ್ನು ಲ್ಯಾಟಿನ್ ಭಾಷೆಯ ‘ರೆಟ್ರೋಗ್ರೇಡಸ್’ ಎಂಬ ಪದದಿಂದ ಪಡೆಯಲಾಗಿದ್ದು, ಹಿಂದಕ್ಕೆ ಹೆಜ್ಜೆಯಿಡುವುದು ಎಂಬರ್ಥವನ್ನು ಸೂಚಿಸುತ್ತದೆ.

ಈ ಹಿಮ್ಮುಖ ಚಲನೆಗೆ ಕಾರಣವೇನು?

Mars retrograde
ಮಂಗಳ ಗ್ರಹದ ಹಿಮ್ಮುಖ ಚಲನೆ. Src: imgur.com

ಪ್ರಾರಂಭದಲ್ಲಿ ಹೇಳಿರುವಂತೆ, ಈ ಚಲನೆಯು ಒಂದು ಭ್ರಮೆ. ಯಾವುದೇ ಗ್ರಹವು ಸೂರ್ಯನ ಸುತ್ತ ತಿರುಗುವಾಗ ತಾನಾಗಿಯೇ ಅದರ ಚಲನೆಯ ದಿಕ್ಕನ್ನು ಬದಲಿಸುವುದಿಲ್ಲ. ಹಾಗಾದರೆ, ಈ ಭ್ರಮೆಯು ಉಂಟಾಗಲು ಕಾರಣ ಏನಿರಬಹುದೆಂದು ನೋಡೋಣ :-

ಸೂರ್ಯನಿಗೆ ಸಮೀಪದ ಕಕ್ಷೆಯಲ್ಲಿ ಸುತ್ತುತ್ತಿರುವ ಗ್ರ‌ಹ ಅಥವಾ ಒಳ ಗ್ರಹವು, ಸೂರ್ಯನ ಸುತ್ತ ಇತರೆ ಗ್ರಹಗಳಿಗಿಂತ ವೇಗವಾಗಿ ಒಂದು ಸುತ್ತನ್ನು ಪೂರ್ಣಗೊಳಿಸುವುದರಿಂದ, ಸಹಜವಾಗಿ ಇತರ ಗ್ರಹಗಳ ಸಮೀಪಕ್ಕೆ ಬರುತ್ತದೆ. ಈ ಸಮಯದಲ್ಲಿ ಆ ಗ್ರಹದ ಹಿಮ್ಮುಖ ಚಲನೆಯು ಸಂಭವಿಸುತ್ತದೆ.

ಭೂಮಿ ಮತ್ತು ಬುಧ ಗ್ರಹವನ್ನು ತೆಗೆದುಕೊಂಡರೆ, ಬುಧ ಗ್ರಹವು ಭೂಮಿಯ ಹತ್ತಿರ ಬರುವ ಕೆಲವು ವಾರಗಳ ಮೊದಲು ಆ ಗ್ರಹದ ಹಿಮ್ಮುಖ ಚಲನೆಯನ್ನು ಗಮನಿಸಬಹುದು. ಬುಧ ಗ್ರಹದ ಕಕ್ಷೆಯು, ಭೂಮಿಯ ಕಕ್ಷೆಗಿಂತ ಚಿಕ್ಕದಾಗಿರುವುದರಿಂದ ಅದು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಒಂದು ಸುತ್ತನ್ನು ಪೂರ್ಣಗೊಳಿಸಲು ಕೇವಲ 88 ದಿನಗಳನ್ನಷ್ಟೇ ತೆಗೆದುಕೊಳ್ಳುತ್ತದೆ. ಆದ್ದರಿಂದ, ಬುಧ ಗ್ರಹದ ಹಿಮ್ಮುಖ ಚಲನೆಯನ್ನು ವರ್ಷಕ್ಕೆ ನಾಲ್ಕು ಬಾರಿ ವೀಕ್ಷಿಸಬಹುದು.

ಅದೇ ರೀತಿ, ಭೂಮಿಯ ಚಲನೆಯನ್ನು ಇತರ ಹೊರ ಗ್ರಹಗಳಾದ ಮಂಗಳ, ಗುರು ಮತ್ತು ಶನಿ ಗ್ರಹಗಳೊಂದಿಗೆ ಪರಿಗಣಿಸಿದರೆ, ಈ‌ ಗ್ರಹಗಳು ಯಾವಾಗಲೂ‌ ಭೂಮಿಯು ಅವುಗಳ ಸಮೀಪಕ್ಕೆ ಬರುವ ಮೊದಲು ಮುಮ್ಮುಖ ಚಲನೆಯಲ್ಲಿರುತ್ತವೆ. ಈ ಗ್ರಹಗಳಲ್ಲಿ ಯಾವುದೇ ಗ್ರಹವನ್ನು ಹಿಂದಿಕ್ಕಿ ಭೂಮಿಯು ಮುಂದಕ್ಕೆ ಕ್ರಮಿಸಿದರೆ; ಉದಾಹರಣೆಗೆ, ಮಂಗಳ ಗ್ರಹವನ್ನು ಪರಿಗಣಿಸಿದರೆ, ಅದು ಹಿಮ್ಮುಖ ಚಲನೆಯನ್ನು ಪ್ರಾರಂಭಿಸುತ್ತದೆ. ಏಕೆಂದರೆ ಆತ ಸಂದರ್ಭದಲ್ಲಿ ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಮಂಗಳ ಗ್ರಹಕ್ಕಿಂತ ಮುನ್ನಡೆಯಲ್ಲಿರುತ್ತದೆ.

ನಮ್ಮ ಸೌರಮಂಡಲದಲ್ಲಿ, ಭೂಮಿಯ ಕಕ್ಷೆಗಿಂತ ಹೊರಗಿನ ಕಕ್ಷೆಗಳಲ್ಲಿರುವ ಗ್ರಹಗಳು ಅಂದರೆ ಹೊರಗ್ರಹಗಳು ದೀರ್ಘ ಅವಧಿಯ ಹಿಮ್ಮುಖ ಚಲನೆಯನ್ನು ಹೊಂದಿವೆ. ಈ ಅವಧಿಯು ಕೆಲವು ತಿಂಗಳುಗಳ ಕಾಲವೂ ಇರಬಹುದು ಏಕೆಂದರೆ, ಅವುಗಳ ಕಕ್ಷೆಯು ಭೂಮಿಯ ಕಕ್ಷೆಗಿಂತ ದೊಡ್ಡದಾಗಿರುವುದರಿಂದ ಅಂತರವನ್ನು ಕ್ರಮಿಸಲು ಹೆಚ್ಚಿನ ಸಮಯ ತಗುಲುತ್ತದೆ.

ನಿತ್ಯಜೀವನದ ಒಂದು ಉದಾಹರಣೆಯ ಮೂಲಕ ಹಿಮ್ಮುಖ ಚಲನೆಯನ್ನು ಇನ್ನೂ ಸುಲಭವಾಗಿ ಅರ್ಥೈಸಿಕೊಳ್ಳೋಣ :-
ವಾಹನಗಳಿಂದ ಕೂಡಿರುವ ರಸ್ತೆಯ ಮೇಲಿನ ಸಂದರ್ಭವೊಂದನ್ನು ಕಲ್ಪಿಸಿಕೊಳ್ಳಿ. ಇಬ್ಬರು ಪ್ರಯಾಣಿಕರು ಎರಡು ಬೇರೆ ಬೇರೆ ವಾಹನಗಳಲ್ಲಿ, ಎರಡು ವಿಭಿನ್ನ ಸಾಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ವಾಹನ A ಯು, ವಾಹನ B ಗಿಂತ ಸ್ವಲ್ಪ ಹಿನ್ನಡೆಯಲ್ಲಿದೆ ಎಂದು ಭಾವಿಸಿ, ಮತ್ತು ಸ್ವಲ್ಪ ಸಮಯದ ನಂತರ ವಾಹನ A ಯು, B ಯನ್ನು ಹಿಂದಿಕ್ಕಿ ಮುಂದುವರೆಯುತ್ತದೆ.
ಇಲ್ಲಿ, ವಾಹನ A ಯನ್ನು ಒಳ ಗ್ರಹವಾಗಿ ಹಾಗೂ ವಾಹನ B ಯನ್ನು ಹೊರ‌ ಗ್ರಹವಾಗಿ ಪರಿಗಣಿಸಬಹುದು.

VoxVox ನ ವಿಡಿಯೋವೊಂದು ಇಲ್ಲಿದ್ದು, ಹಿಮ್ಮುಖ ಚಲನೆಯನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುವ ಈ ವಿಡಿಯೋ ಇಂಗ್ಲಿಷ್ ಭಾಷೆಯಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನೂರಾರು ವರ್ಷಗಳಿಂದ ಚರ್ಚೆಯಲ್ಲಿರುವ ವಿಷಯವಾಗಿರುವ ಗ್ರಹಗಳ ಹಿಮ್ಮುಖ ಚಲನೆಯು, ಕೇವಲ ಸೂರ್ಯನ ಸುತ್ತ ತಮ್ಮ ಕಕ್ಷೆಯಲ್ಲಿರುವ ಗ್ರಹಗಳ ಸಾಪೇಕ್ಷ ಸ್ಥಾನಗಳಿಂಂದ ಉಂಟಾಗುವ ಭ್ರಮೆಯಷ್ಟೇ ಎಂದು ಹೇಳಬಹುದು. ಇಂತಹ ವಿದ್ಯಮಾನಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು ಆಕಾಶ ವೀಕ್ಷಣೆಯ ಮೂಲಕ. ನಿರಂತರವಾಗಿ ಗ್ರಹಗಳನ್ನು, ನಕ್ಷತ್ರಗಳನ್ನು ವೀಕ್ಷಿಸುವಂತಹ ಹವ್ಯಾಸದಿಂದ ಖಗೋಳ ವಿಜ್ಞಾನದ ಹಲವು ಕುತೂಹಲಕಾರಿ ಸಂಗತಿಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

Share:
3


Leave a comment


Your email address will not be published. Required fields are marked *

Shubhashree Shenoy

Author

Currently a student studying 2nd year B.Sc at Poornaprajna College also a member of Poornaprajna Amateur Astronomers Club (PAAC)

Recent Posts


New Year, More Events - Astronomy Events 2024
11 months ago
The Partial Lunar Eclipse of 28th Oct 2023 - Images
1 year ago
28th Oct 2023 – Partial Eclipse: All You Need to Know
1 year ago
ಕನ್ನಡದಲ್ಲಿ ಆಕಾಶವನ್ನು ಅನ್ವೇಷಿಸಿ
1 year ago
Astronomy & Philately - Philately Day Special
1 year ago